ಜೀವನಮಟ್ಟ -
	ಒಂದು ವ್ಯಕ್ತಿ, ಕುಟುಂಬ ಅಥವಾ ಇಡೀ ರಾಷ್ಟ್ರಕ್ಕೆ ಲಭ್ಯವಿರುವ ಅನುಭೋಗಸರಕುಗಳ ಬಗೆ ಮತ್ತು ಪರಿಮಾಣ-ಎಂಬುದು ಜೀವನಮಟ್ಟದ ಸಾಮಾನ್ಯ ಅರ್ಥ. ಇವು ಯಾರಿಗೆ ಧಾರಾಳವಾಗಿ ಲಭ್ಯವಿವೆಯೋ ಅಂಥವರ ಜೀವನಮಟ್ಟ ಉನ್ನತವಾದ್ದೆಂದು ಭಾವಿಸಲಾಗುತ್ತದೆ. ಆದರೆ ಸಮಾಜವಿಜ್ಞಾನದಲ್ಲಿ ಇದನ್ನು ಇನ್ನೂ ವಿಸ್ತಾರವಾದ ಅರ್ಥದಲ್ಲಿ ಪ್ರಯೋಗಿಸಲಾಗಿದೆ. ಇದು ಅನುಭೋಗಸರಕುಗಳ ಬಳಕೆಯ ಪರಿಮಾಣವನ್ನಲ್ಲದೆ ವಿರಾಮಕಾಲಾವಧಿ, ಕೆಲಸದ ಪರಿಸ್ಥಿತಿ, ಉದ್ಯೋಗ ಮತ್ತು ಸರಕುಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ-ಇವೆಲ್ಲವನ್ನೂ ಒಳಗೊಳ್ಳುತ್ತದೆ. ಒಬ್ಬ ವ್ಯಕ್ತಿಗೆ ಅಥವಾ ಒಂದು ಸಮೂಹಕ್ಕೆ ಸರಕು ಸೇವೆಗಳು ಧಾರಾಳವಾಗಿ ಲಭ್ಯವಿರುವುವೆಂಬುದನ್ನು ಮಾತ್ರವಲ್ಲದೆ, ಆ ವ್ಯಕ್ತಿಯ ಅಥವಾ ಸಮೂಹದ ಆಸೆ ಆಕಾಂಕ್ಷೆಗಳು, ಅವುಗಳ ಪೂರೈಕೆಯ ಪ್ರಬಲೇಚ್ಛೆಯನ್ನು ಉಂಟುಮಾಡುವಂಥ ಬಯಕೆಗಳು-ಇವುಗಳಿಂದ ವ್ಯಕ್ತಪಡುತ್ತವೆ. ಒಂದು ದೇಶದ ಜೀವನಮಟ್ಟ ಇನ್ನೊಂದು ದೇಶದ್ದಕ್ಕಿಂತ ಮಿಗಿಲಾದುದೆಂದರೆ, ಮೊದಲನೆಯ ದೇಶದ ನಾಗರಿಕ ಎರಡನೆಯ ದೇಶದವನಿಗಿಂತ ಹೆಚ್ಚಿನ ಪರಿಮಾಣದ ಹಾಗೂ ಹೆಚ್ಚಿನ ಗುಣಮಟ್ಟದ ಸರಕುಗಳನ್ನು ಅನುಭೋಗಿಸುತ್ತಾನಲ್ಲದೆ ಅವನಿಗೆ ಹೆಚ್ಚಿನ ವಿರಾಮ, ಅನುಕೂಲಕರ ಕೆಲಸದ ಪರಿಸ್ಥಿತಿ, ಸರಕು ಮತ್ತು ಉದ್ಯೋಗಗಳನ್ನು ಆರಿಸಿಕೊಳ್ಳುವಲ್ಲಿ ಹೆಚ್ಚಿನ ಸ್ವಾತಂತ್ರ್ಯ ಇವೆ ಎಂದು ಅರ್ಥ.

	ಜೀವನಮಟ್ಟದ ಅಧ್ಯಯನ ಮಾಡುವಾಗ, ಪ್ರಚಲಿತ ಅನುಭೋಗ ಮಟ್ಟವನ್ನಲ್ಲದೆ ಒಂದು ಜನಾಂಗ ಯಾವ ಮಟ್ಟದ ಜೀವನವನ್ನು ನಡೆಸುವುದು ಅವಶ್ಯವೆಂಬುದನ್ನು ಗಮನಿಸಬೇಕು. ಈಗ ನಡೆಯುತ್ತಿರುವ ಅಧ್ಯಯನಗಳು ವಾಸ್ತವವಾಗಿ ಅನುಭೋಗ ಮಟ್ಟಗಳ, ಬದುಕು ಸಾಗಿಸುವ ಮಟ್ಟಗಳ, ಉದರಂಭರಣ ಮಟ್ಟಗಳ ಅಧ್ಯಯನವೆಂದೇ ಹೇಳಬೇಕು. ಜೀವನಮಟ್ಟದ ವ್ಯಾಪಕ ಪರಿಕಲ್ಪನೆಯನ್ನು ಕುರಿತು ಸೂಚನೆಗಳೂ ಪರೋಕ್ಷವಾಗಿ ಈ ಅಧ್ಯಯನಗಳಿಂದ ಲಭ್ಯವಾಗುವುದೆನ್ನಬಹುದು. ಕೆಲವರಿಗೆ, ಸ್ವಲ್ಪಕಾಲದ ಮಟ್ಟಿಗಾದರೂ, ಕೆಲವು ವಸ್ತುಗಳು ಅವರು ಬಯಸುವುದಕ್ಕಿಂತ ಅಧಿಕವಾಗಿರುತ್ತವೆ. ಅಂಥವರ ಬದುಕು ಸಾಗಿಸುವ ಮಟ್ಟ, ಅವರ ಜೀವನಮಟ್ಟಕ್ಕಿಂತ ಹೆಚ್ಚಿನದಾಗಿರುತ್ತದೆ. ಇನ್ನು ಕೆಲವರ ಬದುಕು ಸಾಗಿಸುವ ಮಟ್ಟ ಅವರ ಜೀವನಮಟ್ಟಕ್ಕಿಂತ ಕಡಿಮೆ ಇರುತ್ತದೆ. ಅಸ್ಪಷ್ಟವಾದ, ತೋರಿ ಜಾರುವ ಬಯಕೆಗಳು ಜೀವನಮಟ್ಟದ ಅಂಗವಲ್ಲ, ಪೂರೈಕೆಯ ಪ್ರಬಲೇಚ್ಛೆಯನ್ನು ಪ್ರಚೋದಿಸುವಂಥವು ಮಾತ್ರ ಅದರಲ್ಲಿ ಸೇರುತ್ತವೆ. ಅವುಗಳ ಪೂರೈಕೆಯಿಂದ, ಸಾಧನೆಯಿಂದ ಕೃತಾರ್ಥತೆಯ ಭಾವ ಉಂಟಾಗುತ್ತದೆ. ಅವುಗಳ ನಿರಂತರ ಅಭಾವದಿಂದ ಅತೃಪ್ತಿಗೂ ನಿರಾಶೆಗೂ ಎಡೆಯಾಗುತ್ತದೆ. ಅನುಭೋಗ ಮಟ್ಟದಿಂದ ದೀರ್ಘಕಾಲದಲ್ಲಿ ಜನಸಂಖ್ಯೆಯ ಬೆಳವಣಿಗೆ ಮತ್ತು ಕಾರ್ಮಿಕರ ಸರಬರಾಯಿಯ ಮೇಲೆ ಪರಿಣಾಮ ಉಂಟಾಗುತ್ತದೆ. ಅಲ್ಪಾವಧಿಯಲ್ಲೂ ಕಾರ್ಮಿಕರ ಸರಬರಾಯಿ ವ್ಯತ್ಯಾಸವಾಗುವುದುಂಟು.

	ಯಾವುದೇ ರಾಷ್ಟ್ರದ ಪ್ರಚಲಿತ ಪೂರೈಕೆ ಜೀವನಮಟ್ಟವನ್ನು ನಿರ್ಧರಿಸುವ ಅಂಶಗಳು ಅನೇಕ. ರಾಷ್ಟ್ರದ ಆರ್ಥಿಕತೆ ಯಾವ ಹಂತದಲ್ಲಿದೆ ಎಂಬುದು ಮೊದಲನೆಯದು. ಆರ್ಥಿಕ ದೃಷ್ಠಿಯಿಂದ ಹಿಂದುಳಿದ ರಾಷ್ಟ್ರಗಳಲ್ಲಿ ತಲಾ ವರಮಾನ ಹಾಗೂ ವಿರಾಮಗಳನ್ನು ತನ್ನ ನಾಗರಿಕರಿಗೆ ಕೊಡುವ ಸಾಮಥ್ರ್ಯ ಇರುವುದರಿಂದ ಅವುಗಳಲ್ಲಿ ಜೀವನಮಟ್ಟ ಮೇಲಿನದಾಗಿರುತ್ತದೆ. ಎರಡನೆಯದಾಗಿ, ವೈಜ್ಞಾನಿಕ ಬದಲಾವಣೆಗಳ ಪರಣಾಮವಾಗಿ ಅನುಭೋಗಿಗಳ ಬಯಕೆಗಳನ್ನು ನೂತನ ರೀತಿಯಲ್ಲಿ ಇಲ್ಲವೆ ಅಧಿಕ ಮೊತ್ತದಲ್ಲಿ ಪೂರೈಸುವುದು ಸಾಧ್ಯವಾಗುವುದರಿಂದ ಜೀವನಮಟ್ಟ ಉತ್ತಮಗೊಳ್ಳುತ್ತದೆ. ರಾಷ್ಟ್ರೀಯ ಉತ್ಪಾದನ ಸಾಮಥ್ರ್ಯ ಜನಸಂಖ್ಯೆಯ ಬೆಳವಣಿಗೆಗಿಂತ ಅಧಿಕ ದರದಲ್ಲಿ ಹೆಚ್ಚಿದ್ದರೆ ಜೀವನಮಟ್ಟದಲ್ಲಿ ಏರಿಕೆ ಉಂಟಾಗುತ್ತದೆ. 

ಜೀವನಮಟ್ಟಗಳನ್ನು ಅಳೆದು ಹೋಲಿಸುವ ಕಾರ್ಯ ಸುಲಭವಲ್ಲ. ರಾಷ್ಟ್ರಗಳ ನಡುವಣ ಒಂದು ರಾಷ್ಟ್ರದಲ್ಲಿಯ ವ್ಯಕ್ತಿಗಳ ನಡುವಣ ಅನುಭೋಗ ವಿನ್ಯಾಸದಲ್ಲಿ ವ್ಯತ್ಯಾಸ ಇರುವುದು ಇದಕ್ಕೆ ಕಾರಣ. ಆದರೂ ಜೀವನಮಟ್ಟವನ್ನು ಸ್ಥೂಲವಾಗಿ ಅರಿತುಕೊಳ್ಳಲು ಅನುಸರಿಸಬಹುದಾದ ಎರಡು ವಿಧಾನಗಳುಂಟು. ಒಂದನೆಯದಾಗಿ, ವಿನಿಯೋಗದ (ಇಲ್ಲವೆ ವರಮಾನದ) ಅನುಪಾತವು ಜೀವನಮಟ್ಟದ ಸೂಚಿಯಾದ್ದರಿಂದ, ಒಬ್ಬ ವ್ಯಕ್ತಿಯ ಅಥವಾ ರಾಷ್ಟ್ರದ ಅನುಭೋಗ ವಿನಿಯೋಗದ ಅನುಪಾತವನ್ನು ಕಂಡುಹಿಡಿಯುವುದರ ಮೂಲಕ ಜೀವನಮಟ್ಟವನ್ನು ಅಳೆಯಬಹುದು. ಈ ಕ್ರಮದಿಂದ ಜೀವನಮಟ್ಟವನ್ನು ಸರಿಯಾದ ರೀತಿಯಲ್ಲಿ ಅಳೆಯಬೇಕಾದರೆ ಮುಖ್ಯವಾಗಿ ಎರಡು ಅಂಶಗಳನ್ನು ಗಮನಿಸಬೇಕು : 1. ರಾಷ್ಟ್ರ ರಾಷ್ಟ್ರಗಳ ಮತ್ತು ಪ್ರದೇಶಗಳ ನಡುವೆ ಜೀವನವೆಚ್ಚದಲ್ಲಿ ಇರುವ ವ್ಯತ್ಯಾಸ, 2. ವ್ಯಕ್ತಿಗಳು ತಮ್ಮ ಆದಾಯವನ್ನು ವಿನಿಯೋಗಿಸದೆಯೇ ಪಡೆಯುವಂಥ ಸರಕು ಸೇವೆಗಳ ಸೌಲಭ್ಯಗಳಲ್ಲಿ ಕಂಡುಬರುವ ವ್ಯತ್ಯಾಸ. ಜೀವನಮಟ್ಟವನ್ನು ಅಳೆದು ಹೋಲಿಸುವುದರಲ್ಲಿ ಪ್ರಯೋಗಿಸಬಹುದಾದ ಎರಡನೆಯ ವಿಧಾನವನ್ನು ಎಂಗೆಲನ ನಿಯಮದಿಂದ ರೂಪಿಸಲಾಗಿದೆ. ವ್ಯಕ್ತಿ ಅಥವಾ ರಾಷ್ಟ್ರದ ವರಮಾನ ಹೆಚ್ಚಿದಂತೆ (ಜೀವನಮಟ್ಟ ಏರಿದಂತೆ) ಆಹಾರಕ್ಕಾಗಿ ವಿನಿಯೋಗಿಸಲ್ಪಡುವ ವರಮಾನದ ಅನುಪಾತ ಕಡಿಮೆಯಾಗುತ್ತ ಹೋಗುತ್ತದೆಂದು ಎಂಗೆಲನ ನಿಯಮ ತಿಳಿಸುತ್ತದೆ. ಆರ್ಥಿಕವಾಗಿ ಮುಂದುವರಿದ ರಾಷ್ಟ್ರಗಳಲ್ಲಿ ಆಹಾರಕ್ಕಾಗಿ ವರಮಾನದ ಕಾಲುಭಾಗದಷ್ಟು ವಿನಿಯೋಗವಾದರೆ ಹಿಂದುಳಿದ ರಾಷ್ಟ್ರಗಳಲ್ಲಿ ಮೂರನೆ ಎರಡರಷ್ಟು ವಿನಿಯೋಗವಾಗುತ್ತದೆ. ಎಂದರೆ ಆಹಾರಕ್ಕಾಗಿ ವಿನಿಯೋಗಿಸಲ್ಪಡುವ ವರಮಾನ ಜೀವನಮಟ್ಟಕ್ಕೆ ವ್ಯಸ್ತಾನುಪಾತದಲ್ಲಿರುತ್ತದೆ. ಒಂದು ಸಮುದಾಯದಲ್ಲಿ ಆಹಾರಕ್ಕಾಗಿ ವಿನಿಯೋಗಿಸಲಾಗುವ ವರಮಾನದ ಅನುಪಾತವನ್ನು ಕಂಡುಹಿಡಿಯುವುದರಿಂದ ಅವರ ಜೀವನಮಟ್ಟವನ್ನು ಅರಿಯಬಹುದು.

	ಜೀವನಮಟ್ಟದ ಪ್ರಭಾವ:	ಕೆಲವು ಆರ್ಥಿಕ ಅಂಶಗಳು ಜೀವನಮಟ್ಟದಿಂದ ಪ್ರಭಾವಿತಗೊಳ್ಳುವುವು. ಉದಾಹರಣೆಗೆ, ಅಧಿಕ ಜೀವನಮಟ್ಟದ ನಿರೀಕ್ಷೆಯಿಂದಾಗಿ ವ್ಯಕ್ತಿಗಳು ತಮಗೆ ಬೇಡವೆನಿಸಿದ ಕ್ಷೇತ್ರ ಹಾಗೂ ಉದ್ಯೋಗಗಳಿಗೆ ಆಕರ್ಷಿಸಲ್ಪಡುವುದರಿಂದ ಕಾರ್ಮಿಕರ ಪ್ರಾದೇಶಿಕ ಹಾಗೂ ಔದ್ಯೋಗಿಕ ಚಲನೆ ತೀವ್ರಗೊಳ್ಳುತ್ತದೆ. ಆದ್ದರಿಂದ ಕಾರ್ಮಿಕರ ಚಲನೆಯ ಮೇಲೆ ಜೀವನಮಟ್ಟ ಪ್ರಭಾವ ಬೀರುತ್ತದೆ. ಎರಡನೆಯದಾಗಿ ಜೀವನಮಟ್ಟದಿಂದ ಶ್ರಮದ ಸರಬರಾಜಿನ ಮೇಲೆ ಪ್ರಭಾವ ಉಂಟಾಗುತ್ತದೆ. ಜೀವನಮಟ್ಟ ಏರಿದಂತೆ ವ್ಯಕ್ತಿ ವಿರಾಮದತ್ತ ಹೆಚ್ಚು ಒಲವನ್ನು ತೋರಿಸುವುದರಿಂದ ಶ್ರಮದ ಸರಬರಾಜು ಕಡಿಮೆಯಾಗುತ್ತದೆ. ವ್ಯಾಪಾರ ಆವರ್ತಗಳ ಅಧ್ಯಯನದಲ್ಲಿ ಜೀವನಮಟ್ಟದ ಪರಿಕಲ್ಪನೆ ಸಹಾಯವಾಗುತ್ತದೆ. ವ್ಯಾಪಾರ ಆವರ್ತಗಳ ತಿರುವನ್ನು ಅಧ್ಯಯನ ಮಾಡುವಾಗ, ವರಮಾನಗಳಲ್ಲಿ ಏರಿಳಿತಗಳಾದಾಗ ವ್ಯಕ್ತಿಗಳ ಅನುಭೋಗ ಹಾಗೂ ಉಳಿತಾಯ ನಿಷ್ಪತ್ತಿಗಳಲ್ಲಿ ಯಾವ ಬಗೆಯ ವ್ಯತ್ಯಾಸಗಳುಂಟಾಗುತ್ತವೆ ವರಮಾನ ಇಳಿಯುವ ಪ್ರವೃತ್ತಿಗೆ ಒಳಗಾದಾಗ ಅನುಭೋಗಿಗಳು ಆಸ್ತಿಗಳನ್ನು ಮಾರಿ ತಮ್ಮ ಪಾರಂಪರಿಕ ಅನುಭೋಗ ಮಟ್ಟವನ್ನು ಹೇಗೆ ಉಳಿಸಿಕೊಂಡು ಬರಲು ಯತ್ನಿಸುತ್ತಾರೆ, ಎಂಬುದನ್ನು ಅರಿತುಕೊಳ್ಳಬೇಕು. ಇದಕ್ಕೆ ಜೀವನಮಟ್ಟದ ಹಾಗೂ ಅದನ್ನು ನಿರ್ಧರಿಸುವ ಅಂಶಗಳ ಪರಿಚಯ ಅತ್ಯಾವಶ್ಯಕ. 

	ಜೀವನಮಟ್ಟ ಹಾಗೂ ಜನಸಂಖ್ಯೆಯ ಬೆಳವಣಿಗೆ:	ಜೀವನಮಟ್ಟದಿಂದ ಧೀರ್ಘಾವಧಿಯಲ್ಲಿ ಜನನದರ, ಜನಸಂಖ್ಯೆಯ ಬೆಳವಣಿಗೆ ಹಾಗೂ ವಿನಿಯೋಗ ಕಾರ್ಮಿಕರ ಸರಬರಾಯಿಯ ಮೇಲೆ ಪರಿಣಾಮ ಉಂಟಾಗುತ್ತದೆಂಬ ಅಭಿಪ್ರಾಯ ಬೆಳೆದು ಬಂದಿದೆ. 18ನೆ ಮತ್ತು 19ನೆಯ ಶತಮಾನಗಳಲ್ಲಿ ಮಾಲ್ಥಸನ ಜನಸಂಖ್ಯಾಸಿದ್ಧಾಂತದಿಂದ ಪ್ರಭಾವಿತರಾದವರು ಜೀವನಮಟ್ಟಕ್ಕೂ ಜನಸಂಖ್ಯೆಯ ಬೆಳವಣಿಗೆಗೂ ನೇರ ಸಂಬಂಧ ಕಲ್ಪಿಸಿದರು. ಜೀವನಮಟ್ಟ ಏರಿದಂತೆಲ್ಲ ಕುಟುಂಬದ ಗಾತ್ರವನ್ನು ವಿಸ್ತರಿಸುವ, ಜೀವನಮಟ್ಟ ಇಳಿದಂತೆ ಕುಟುಂಬದ ಗಾತ್ರವನ್ನು ಕಡಿಮೆ ಮಾಡುವ ಪ್ರವೃತ್ತಿ ಜನರಲ್ಲಿ ಉಂಟಾಗುವುದೆಂಬುದು ಅರ್ಥಶಾಸ್ತ್ರಜ್ಞರ ಅಭಿಪ್ರಾಯವಾಗಿತ್ತು.

	ಆದರೆ 20ನೆಯ ಶತಮಾನದ ಆರಂಭದ ವೇಳೆಗೆ ರಾಷ್ಟ್ರೀಯ ಉತ್ಪಾದಕತೆಯ ಏರಿಕೆಯಿಂದ ಜೀವನಮಟ್ಟದಲ್ಲಿ ಏರಿಕೆ ಉಂಟಾಗಿದ್ದರೂ ಕೈಗಾರಿಕಾ ದೇಶಗಳಲ್ಲಿ ಜನಸಂಖ್ಯೆಯ ಏರಿಕೆ ಆಗಲಿಲ್ಲ. ಜೀವನಮಟ್ಟ ಜನಸಂಖ್ಯೆಯ ಮೇಲೆ ಬೀರುವ ಪ್ರಭಾವದ ಬಗ್ಗೆ ಹಿಂದೆ ಇದ್ದ ಅಭಿಪ್ರಾಯಗಳನ್ನು ಪುನರ್ವಿಮರ್ಶಿಸುವುದು, ಮಾರ್ಪಾಟು ಮಾಡುವುದು ಅವಶ್ಯವಾಯಿತು. ಆರ್ಥಿಕ ಅಭಿವೃದ್ಧಿಯಿಂದ ಏರುಗತಿಯ ಜೀವನಮಟ್ಟವನ್ನು ಅನುಭವಿಸುವ ಸಮಾಜಗಳಲ್ಲಿ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ತಮ್ಮ ಕುಟುಂಬಗಳ ಗಾತ್ರವನ್ನು ಕಿರಿದು ಮಾಡಿಕೊಳ್ಳುವ ಮನೋವೃತ್ತಿ ಹೊಂದಿರುತ್ತಾರೆ ಎಂಬ ಅಂಶ ಬೆಳಕಿಗೆ ಬಂತು. ಜೀವನಮಟ್ಟಕ್ಕೂ ಜನಸಂಖ್ಯೆಗೂ ವ್ಯಸ್ತಸಂಬಂಧ ಇರುವುದನ್ನು ಅರ್ಥಶಾಸ್ತ್ರಜ್ಞರು ಕಂಡುಕೊಂಡರು. ಈ ಬಗೆಯ ಸಂಬಂಧವನ್ನು ಸ್ಥಾಪಿಸಿದವರು ಎರಡು ಆತಂಕಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸಿದರು. ಜೀವನಮಟ್ಟ ಏರಿದಂತೆ ಒಟ್ಟು ಜನಸಂಖ್ಯೆಯೇ ಕಡಿಮೆಯಾಗುವಷ್ಟರ ಮಟ್ಟಿಗೆ ಜನನದರ ಇಳಿಯಬಹುದು ಎಂಬುದು ಒಂದು. ಈ ಬಗೆಯ ಭೀತಿಯನ್ನು ಮನಗಂಡ ರಾಷ್ಟ್ರಗಳು-ಮುಖ್ಯವಾಗಿ ರಕ್ಷಣಾದೃಷ್ಟಿಯಿಂದ ಹೆಚ್ಚು ಜನಸಂಖ್ಯೆ ಇರಬೇಕೆಂಬ ಭಾವನೆಯುಳ್ಳ ರಾಷ್ಟ್ರಗಳು-ಜನಸಂಖ್ಯೆಯ ಏರಿಕೆಯನ್ನು ಉತ್ತೇಜಿಸುವ ನೀತಿ ಅನುಸರಿಸಲು ಪ್ರಾರಂಭಿಸಿದವು. ಅಧಿಕ ವರಮಾನದ ಕುಟುಂಬಗಳಲ್ಲಿಯ ಜನನದರದ ಮೇಲೆ ಜೀವನಮಟ್ಟದ ಏರಿಕೆಯ ಪರಿಣಾಮ ಹೆಚ್ಚಾಗಿ ಉಂಟಾಗುವುದರಿಂದ ರಾಷ್ಟ್ರದ ಜನಸಂಖ್ಯೆಯ ಗುಣಮಟ್ಟ ಕಡಿಮೆಯಾಗುವ ಸಂಭವವುಂಟು ಎಂಬುದು ಎರಡನೆಯ ಆತಂಕ. ಅಧಿಕ ಜೀವನಮಟ್ಟವಿರುವ ಕುಟುಂಬಗಳಲ್ಲಿ ಜನಸಂಖ್ಯೆ ಕಡಿಮೆಯ ದರದಲ್ಲೂ, ಕಡಿಮೆಯ ಜೀವನಮಟ್ಟ ಇರುವ ಕುಟುಂಬಗಳಲ್ಲಿ ಜನಸಂಖ್ಯೆ ಹೆಚ್ಚಿನ ದರದಲ್ಲೂ ಬೆಳವಣಿಗೆ ಹೊಂದಿ, ರಾಷ್ಟ್ರದ ಒಟ್ಟು ಜನಸಂಖ್ಯೆಯಲ್ಲಿ ಬಡವರ ಹಾಗೂ ಯೋಗ್ಯಮಟ್ಟದ ವಿದ್ಯೆ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸಿಕೊಳ್ಳವ ಸಾಮಥ್ರ್ಯ ಉಳ್ಳವರ ನಡುವಣ ನಿಷ್ಪತ್ತಿ (ರೇಷಿಯೊ) ಅಧಿಕವಾಗುತ್ತದೆ.

	ಕೆಳಗಿನ ಜೀವನಮಟ್ಟದ ಕುಟುಂಬಗಳ, ಸಮಾಜಗಳ ಜನಸಂಖ್ಯೆ ಅಧಿಕ ದರದಲ್ಲಿ ಏರುವ ಸಂಭವವಿದೆ ಎಂಬ ಅಂಶ ಈಚೆಗೆ ಮನವರಿಕೆಗೆ ಬರತೊಡಗಿತು. ಕಡಿಮೆ ತಲಾ ವರಮಾನವಿರುವ ರಾಷ್ಟ್ರಗಳಲ್ಲಿ ಜನನದರ ಅಧಿಕ ಎಂಬುದು ವಿಶ್ವಸಂಸ್ಥೆಯ ಅನೇಕ ಅಧ್ಯಯನಗಳಿಂದ ವ್ಯಕ್ತಪಟ್ಟಿದೆ. ಕಡಿಮೆ ತಲಾ ವರಮಾನ ಹಾಗೂ ಕೆಳಗಿನ ಜೀವನಮಟ್ಟದ ಸಮಾಜಗಳು ಈಗ ತಮ್ಮ ಜನಸಂಖ್ಯೆಯನ್ನು ಯೋಜಿಸುವುದರಲ್ಲಿ ನಿರತವಾಗಿವೆ. ಅಭಿವೃದ್ಧಿಶೀಲ ದೇಶಗಳಲ್ಲಿ ಜೀವನಮಟ್ಟದ ಏರಿಕೆಯ ದರಕ್ಕಿಂತಲೂ ಜನಸಂಖ್ಯೆಯ ಬೆಳವಣಿಗೆಯ ದರ ಅಧಿಕವಾಗಿದೆಯೆಂಬುದು ಈ ಅಧ್ಯಯನಗಳಿಂದ ವ್ಯಕ್ತಪಟ್ಟಿರುವ ಅಂಶ. ಆರ್ಥಿಕ ಅಭಿವೃದ್ಧಿಯ ಮೊದಮೊದಲ ಘಟ್ಟಗಳಲ್ಲಿ ಈ ಪ್ರವೃತ್ತಿ ಕಂಡುಬರುತ್ತದೆ. (ನೋಡಿ- ಜನಸಂಖ್ಯೆ)

 	ಯೋಗ್ಯ ಜೀವನಮಟ್ಟ: 	ಸಮಾಜದ ಪ್ರತಿ ವ್ಯಕ್ತಿ ಹಾಗೂ ಕುಟುಂಬ ಒಂದು ಯೋಗ್ಯ ಜೀವನಮಟ್ಟವನ್ನು ಅನುಭವಿಸುವುದು ಅತ್ಯಾವಶ್ಯಕವೆಂದು ಈಗ ಒಪ್ಪಿಕೊಳ್ಳಲಾಗಿದೆ. ಇದಕ್ಕೆ ಕಾರಣಗಳಿವು : 1. ತೀರ ಕೆಳಗಿನ ಜೀವನಮಟ್ಟದಿಂದ ವ್ಯಕ್ತಿ ಯೋಗ್ಯ ಪೋಷಣೆಯನ್ನು ಪಡೆಯಲಾಗದೆ ರೋಗರುಜಿನಗಳಿಗೆ ತುತ್ತಾಗುವ ಸಂಭವವುಂಟು. ಇದರಿಂದ ಅವನ ಕಾರ್ಯ ಸಾಮಥ್ರ್ಯ ಕಡಿಮೆಯಾಗಿ ರಾಷ್ಟ್ರದ ಉತ್ಪತ್ತಿ ಮತ್ತು ಆರ್ಥಿಕ ಮುನ್ನಡೆ ಕುಂಠಿತಗೊಳ್ಳುವುವು. 2. ಕೆಳಗಿನ ಜೀವನಮಟ್ಟ ಇರುವ ರಾಷ್ಟ್ರಗಳಲ್ಲಿ ಸಾಕಷ್ಟು ವಿನಿಯೋಗಕ್ಕೆ ಸಾಲುವಷ್ಟು ವರಮಾನವೂ ಇರುವುದಿಲ್ಲವಾದ್ದರಿಂದ ವಿನಿಯೋಜನೆ (ಇನ್ವೆಸ್ಟ್‍ಮೆಂಟ್) ಮತ್ತು ಉತ್ಪಾದನೆಗೆ ಸಾಕಷ್ಟು ಉತ್ತೇಜನ ಇಲ್ಲದಂತಾಗುತ್ತದೆ. 3. ಒಂದು ಸಮಾಜದಲ್ಲಿ ಕೆಳಗಿನ ಜೀವನಮಟ್ಟದ ಜನರ ಅನುಪಾತ ಹೆಚ್ಚಾಗಿದ್ದರೆ ಅದರಿಂದ ರಾಜಕೀಯ ಭದ್ರತೆಗೆ ಧಕ್ಕೆ ಒದಗುವ ಸಂಭವ ಉಂಟು. 4. ಆಧುನಿಕ ಸರ್ಕಾರಗಳು ಕಲ್ಯಾಣ ಸಮಾಜಗಳನ್ನು ಸ್ಥಾಪಿಸಲು ಹೊರಟಿರುವುದರಿಂದ ಅವು ತಮ್ಮ ನಾಗರೀಕರಿಗೆ ಯೋಗ್ಯ ಜೀವನಮಟ್ಟವನ್ನು ನಿಶ್ಚಿತವಾಗಿ ದೊರಕಿಸಿಕೊಡುವ ಧ್ಯೇಯ ಹೊಂದಿರುತ್ತವೆ.

	ಈ ಕಾರಣಗಳಿಂದಾಗಿ ಸರ್ಕಾರಗಳು ತಮ್ಮ ನಾಗರಿಕ ಜೀವನಮಟ್ಟವನ್ನು ಏರಿಸುವುದರಲ್ಲಿ ಸಹಾಯವಾಗುವ ಧೋರಣೆಗಳ ಅನುಸರಣೆಯಲ್ಲಿ ಆಸಕ್ತಿ ತೋರಿಸುತ್ತವೆ. ತಮ್ಮ ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಹಾಗೂ ಪರಿಣಾಮದಲ್ಲಿ ಬಳಸಿಕೊಳ್ಳುವ, ಜನರ ಆರ್ಥಿಕ ಅಂತರಗಳನ್ನು ಕಡಿಮೆಮಾಡುವ, ಬಡವರಿಗೆ ಧನ ಸಹಾಯ, ವಿದ್ಯೆ, ವೈದ್ಯ ಸೌಲಭ್ಯಗಳೇ ಮುಂತಾದ ಸೇವೆಗಳನ್ನು ಉಚಿತವಾಗಿ ನೀಡುವ ನೀತಿಗಳನ್ನು ಸರ್ಕಾರಗಳು ಅನುಸರಿಸುತ್ತಿವೆ.

	ಆಧುನಿಕ ಸರ್ಕಾರಗಳು ತಮ್ಮ ನಾಗರಿಕರಿಗೆ ಒಂದು ನಿರ್ದಿಷ್ಟವಾದ ಅವಧಿಯಲ್ಲಿ ಒಂದು ಕನಿಷ್ಠ ಜೀವನಮಟ್ಟವನ್ನು ಹೊರಕಿಸಿಕೊಡಬೇಕೆಂಬ ಧ್ಯೇಯವನ್ನು ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ಉದಾಹರಣೆಗೆ, ಭಾರತ ಸರ್ಕಾರ ಐದನೆಯ ಯೋಜನೆಯ ಅಂತ್ಯದ ಹೊತ್ತಿಗೆ ಒಂದು ನಿಶ್ಚಿತ ಕನಿಷ್ಠ ಜೀವನಮಟ್ಟವನ್ನು ದೊರಕಿಸುವ ದೃಷ್ಠಿಯಿಂದ ಕೆಲವು ಕಾರ್ಯಕ್ರಮಗಳನ್ನು ಕೈಗೊಳ್ಳಲು ಉದ್ಯುಕ್ತವಾಗಿದೆ. ಅದರಲ್ಲಿ ಸೂಚಿಸಲಾಗಿರುವ ಕನಿಷ್ಠ ಜೀವನಮಟ್ಟದ ನಿರ್ಧಾರಕವಾಗಿ ಕನಿಷ್ಠ ಅನುಭೋಗಮಟ್ಟವನ್ನು ಸೂಚಿಸಲಾಗಿದೆ. ಪ್ರತಿವ್ಯಕ್ತಿಗೆ ಕನಿಷ್ಠವಾಗಿ ಅವಶ್ಯಕವಾದ ಆಹಾರ, ಬಟ್ಟೆ, ವಸತಿ ಮತ್ತು ಇತರ ಸೌಲಭ್ಯಗಳ ಆಧಾರದ ಮೇಲೆ ಕನಿಷ್ಠ ಅನುಭೋಗ ಮಟ್ಟವನ್ನು ನಿರ್ಧರಿಸಲಾಗುತ್ತದೆ. ಈ ಕನಿಷ್ಠ ಅನುಭೋಗ ಮಟ್ಟವನ್ನು ಪಡೆಯದವರು ಭಾರತದಲ್ಲಿ ಸೇ.40ರಷ್ಟು ಇದ್ದಾರೆಂಬುದು ಕೆಲವು ಅಧ್ಯಯನಗಳಿಂದ ಗೊತ್ತಾಗಿದೆ. 

	ದೇಶದ ಬಡತನವನ್ನು ತೊಡೆದುಹಾಕಿ ಎಲ್ಲ ನಾಗರಿಕರಿಗೂ ಕನಿಷ್ಠ ಅನುಭೋಗ ಮಟ್ಟವನ್ನು ದೊರಕಿಸಲು ಐದನೆಯ ಯೋಜನೆಯಲ್ಲಿ ಸೂಚಿಸಿರುವ ಕ್ರಮಗಳು ಎರಡು ಬಗೆ : ಬಡತನವನ್ನು ನೀಗಿಸಲು ಆರ್ಥಿಕ ಬೆಳೆವಣಿಗೆಯನ್ನು ತ್ವರೆಪಡಿಸುವುದರ ಜೊತೆಗೆ ಬಡವರಿಗೆ ಅನುಕೂಲಕರವಾಗುವಂತೆ ಬೆಳವಣಿಗೆಯನ್ನು ಯೋಜಿಸುವುದು ಒಂದು ಬಗೆ. ಆಹಾರ ಮತ್ತು ಸಾರ್ವತ್ರಿಕ ಅನುಭೋಗ ಸರಕುಗಳನ್ನು ಅಧಿಕ ಪರಿಮಾಣಗಳಲ್ಲಿ ಉತ್ಪಾದಿಸಲು ಪ್ರೋತ್ಸಾಹ ನೀಡುವ, ಜನಸಾಮಾನ್ಯರ ಉತ್ಪಾದನಾ ಸಾಮಥ್ರ್ಯವನ್ನೂ ಅನುಭೋಗ ಸರಕು ಉತ್ಪಾದನ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಲ್ಲ ವಿನಿಯೋಜನೆಗಳನ್ನು ಉತ್ತೇಜಿಸುವ ಕ್ರಮಗಳು ಇದರಲ್ಲಿ ಸೇರಿವೆ. ಜನರ ಆರ್ಥಿಕ ಅಂತರಗಳನ್ನು ಕಡಿಮೆಗೊಳಿಸಿ ಬಡತನವನ್ನು ತೊಡೆದುಹಾಕಲು ಯತ್ನಿಸುವ ಕ್ರಮಗಳು ಎರಡನೆಯ ಬಗೆ. ಹಿಂದುಳಿದ ಕ್ಷೇತ್ರಗಳ ಅಭಿವೃದ್ಧಿ, ಕಡಿಮೆ ಜೀವನಮಟ್ಟದ ವರ್ಗಗಳ ಕುಟುಂಬಯೋಜನಾ ಕಾರ್ಯಕ್ರಮದ ವಿಸ್ತರಣೆ ಮುಂತಾದವು ಈ ಬಗೆಯ ಕ್ರಮಗಳು.
(ಎ.ಬಿ.ಎ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ